Most visited city portal of Mysuru.

ನಾವು ಯಾರ್ಗೂ ಕಮ್ಮಿ ಇಲ್ಲ


ರಾಮಾನುಜಾ ರಸ್ತೆಯ ಶ್ರೀನಿವಾಸ ಅಗ್ರಹಾರದಲ್ಲಿ ಭಕ್ತಕುಂಬಾರ ಖ್ಯಾತಿಯ ಹುಣಸೂರು ಕೃಷ್ಣಮೂರ್ತಿಗಳು... ಎಂಟನೇ ಕ್ರಾಸಿನಲ್ಲಿ ಪುಟ್ಟಣ್ಣ ಕಣಗಾಲ್ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು...

ಹತ್ತನೇ ಕ್ರಾಸಿನ ಮೊದಲನೇ ಪಾರ್ಕಿನ ಮೂಲೆಯ ಮನೆಯಲ್ಲಿ ನಟ ನಿರ್ಮಾಪಕ ಚೇತನ್ ರಾಮರಾವು... ಹದಿನೆಂಟನೇ ಕ್ರಾಸಿಗೆ ಬಂದರೆ ಬಲಭಾಗದ ಎರಡನೇ ಮನೆ ಹಾಸ್ಯನಟ ರತ್ನಾಕರ್ ಅವ್ರದ್ದು...

ಹತ್ತೊಂಭತ್ತರಲ್ಲಿ ಬಾಲಿವುಡ್ಡಿನ ನಿರ್ದೇಶಕ ರೋಹಿತ್ ಶೆಟ್ಟಿಯ ಅಪ್ಪ ಫೈಟರ್ ಶೆಟ್ಟಿ ಇದ್ರು...

ಅಷ್ಟಾಯಿತಾ... ತಡ್ಕೊಳಿ ಇನ್ನೂ ಮುಗಿದಿಲ್ಲ ನೂರೊಂದು ಗಣಪತಿ ಹಿಂಭಾಗದ ಬಸವೇಶ್ವರ ರಸ್ತೆಲೇ ನಮ್ಮ ಜೂನಿಯರ್ ನರಸಿಂಹರಾಜು ಹುಟ್ಟಿ ಬೆಳೆದಿದ್ದು... ಅದೇ ನೂರೊಂದು ಗಣಪತಿಯನ್ನು ಬಳಸಿಕೊಂಡು ನಂಜುಮಳಿಗೆ ಸರ್ಕಲ್ಲು ಹತ್ತಿ ನೈರುತ್ಯಕ್ಕೆ ಬಂದರೆ ಅಲ್ಲಿ ನಿಮಗೆ ಸಿಗೋದು ಗೋಪಾಲ ಸ್ವಾಮಿ ಶಿಶುವಿಹಾರ... ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ ಅಲ್ಲೇ ಓದುತ್ತಾ ಇದ್ದಿದ್ದು...

ಅದೇ ದೇಗುಲದ ವಾಯುವ್ಯ ಮೂಲೆಯಲ್ಲಿದ್ದ ಚಡ್ಡಿ ಚಪಾತಿ ಗುರುಮಲ್ಲಪ್ಪ ಹೋಟೆಲಿನ ಹಿಂಭಾಗದ ಮನೆಯ ಖಾಯಂ ಸದಸ್ಯ / ಅತಿಥಿ ಕಲಾರತ್ನ ಉದಯ ಕುಮಾರ್...

ಅಲ್ಲಿಂದ ಉತ್ತರಕ್ಕೆ ತಿರುಗಿ ಸೀದಾ ಲಕ್ಷ್ಮೀಪುರಂ ಗೆ ಬನ್ನಿ... ಅಲ್ಲಿ ನೀವು "ಕುಮಾರಿ ಜಯಲಲಿತಾ" ಹುಟ್ಟಿದ ಮನೆ ಕಣ್ತುಂಬಿಕೊಳ್ಳಬಹುದು... ಅಲ್ಲಿ ಅದನ್ನ ನೋಡ್ಕೊಂಡು ಸೀದಾ ಕೆಳಕ್ಕಿಳಿದು ಬಲ್ಲಾಳ್ ಸರ್ಕಲ್ಲು ದಾಟಿ ಕೊಪ್ಪಲ್ ರೈಲ್ವೆ ಸೇತುವೆ ಕೆಳಗೆ ನುಸುಳಿ ಬಂದ್ರೆ... ಸರಸ್ವತಿಪುರದ ಮೂರನೇ ಮೈನಿನಲ್ಲಿ ನಮ್ಮ ಜಲೀಲ... ಅಂಬರೀಶಣ್ಣ...

ಬುಲ್ ಬುಲ್ ಮಾತಾಡಕಿಲ್ವಾ... ಮೊದಲನೇ ಮೈನಿನಲ್ಲಿ ೧೯೫೧ ರಲ್ಲಿ ಬಿಡುಗಡೆಯಾದ "ಜಗನ್ಮೋಹಿನಿ" ಚಿತ್ರದ ನಾಯಕಿ ಪ್ರತಿಮಾದೇವಿ,ಮತ್ತವರ ಮಕ್ಕಳಾದ ನಟ, ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಮತ್ತು ನಮ್ಮ ಕಾಲದ ನಾಯಕಿ ವಿಜಯಲಕ್ಷ್ಮಿ ಸಿಂಗ್, ಹೀರೋ ಆದಿತ್ಯ... ಅಲ್ಲಿಂದ ಎರಡು ಕ್ರಾಸು ಪಕ್ಕಕ್ಕೆ ರಾಮಾಚಾರಿ ಮೇಷ್ಟ್ರು... ಅಶ್ವಥ್... ಇನ್ನೂ ಇದೆ ರೀ...

ಸರಸ್ವತಿಪುರಂ ದಾಟಿ ಮಾನಸಗಂಗೋತ್ರಿ ಮುಟ್ಟಿ ಪಕ್ಕಕ್ಕೆ ಬಿದ್ರೆ ಪಡುವಾರಹಳ್ಳಿ... ಅಲ್ಲೇ ಅಲ್ವೇನ್ರಿ ನಮ್ ಅಣ್ತಮ್ಮ ಯಶ್ ಇರೋದು... ಅಲ್ಲಿಂದ ಸೀದಾ ಕಾಳಿದಾಸ ರಸ್ತೆಗೆ ಬನ್ನಿ... ಪಂಚವಟಿ ಜಂಗ್ಷನ್ನು ಯಾರುದ್ದು ಅಂದ್ಕೊಂಡ್ರಿ... ಎಂಪಿ ಶಂಕರ್ರು... ಅವರ ಮನೆ ಹೆಸರೇ ಪಂಚವಟಿ... ಅದನ್ನೇ ಆ ಕೂಡು ರಸ್ತೆಗೂ ಇಟ್ಟಿದ್ದಾರೆ...

ಅಲ್ಲಿಂದ ಕೆ.ಆರ್. ಸರ್ಕಲ್ಲು ದಾಟಿ ಕೊಂಡು ಹಾರ್ಡಿಂಗ್ಸ್ ಸರ್ಕಲ್ಲು ಮುಟ್ಟಿ ಬಲಕ್ಕೆ ತಿರುಗಿದರೆ ಇಟ್ಟಿಗೆ ಗೂಡು... ಅಲ್ಲೇ ಅಲ್ವೇನ್ರಿ ನಮ್ ಬಂಗ್ಲೆ ಶಾಮರಾಯರ ಮಗ ದ್ವಾರಕೀಶ್ ಹುಟ್ಟಿ ಬೆಳೆದಿದ್ದು... ಅಲ್ಲಿಂದ ಒಂದು ನೂರಡಿ ದೂರದಲ್ಲಿ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜು ಅವರ ನಿವಾಸ...

ಅಲ್ಲಿಂದ ಕಾರಂಜಿ ಕೆರೆಗೆ ಬಿದ್ದು ಈಜಿಕೊಂಡು ಆ ಕಡೆ ದಡ ಮುಟ್ಟಿದ್ರೆ ಸಿದ್ದಾರ್ಥ ಲೇ ಔಟು... ಅಲ್ಲೇ ತಾನೇ ನಮ್ಮ ತೂಗುದೀಪ ಶ್ರೀನಿವಾಸ್ ಮನೆ ಕಟ್ಕೊಂಡಿದ್ದು... ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲೇ ಹುಟ್ಟಿ ಬೆಳೆದಿದ್ದು... ಅವರ ಸಹೋದರ ನಿರ್ಮಾಪಕ ದಿನಕರ್ ಈಗ್ಲೂ ಅಲ್ಲೇ ಇರೋದು ಕಣ್ರೀ... ಸಾಕಾ...

ಆಲ್ಮೋಸ್ಟ್ ಇಡೀ ಕನ್ನಡ ಚಿತ್ರರಂಗದ ಮಧ್ಯಾನೆ ನಾವು ಬೆಳೆದಿದ್ದು...

- By Arenalli Shivashankar Dharmendra Kumar

PC: Dinakar Konanur



About MasthMysore

MasthMysore.Com has been the number one city portal of Mysore ever since it's inception in 2010. From tourist places to useful phone numbers and train timings, from movie schedules to happening events, from business listings to job postings, from facts/trivia to rare photo/video galleries, one can get every possible information about Mysore - past, present and upcoming.